Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಕಾಡು ಉಳಿಸಿ……. ನಾಡು ಉಳಿಸಿ…….

    1 week ago

    ವಿವೇಕಾನಂದ ಎಚ್.ಕೆ ಈ ತಕ್ಷಣಕ್ಕೆ ಯಾವುದು ಹೆಚ್ಚು ಮಹತ್ವದ್ದು ಮತ್ತು ತೀರಾ ಅನಿವಾರ್ಯವಾದದ್ದು……. ಇತ್ತೀಚೆಗೆ ಶಾಂತಿಗಾಗಿ ನೊಬೆಲ್ ಪ್ರಶಸ್ತಿ ವಿಜೇತ ಟಿಬೆಟ್ ನ ಬೌದ್ಧ ಧರ್ಮಗುರು ದಲೈಲಾಮಾ ಅವರನ್ನು ಭೇಟಿಯಾಗಲು ಉತ್ತರ ಕನ್ನಡದ ಮುಂಡಗೋಡ ಟಿಬೆಟಿಯನ್ ನಿರಾಶ್ರಿತರ ಶಿಬಿರಕ್ಕೆ ಹೋಗಿದ್ದೆವು. ಅತ್ಯಂತ ಶಿಸ್ತು ಬದ್ಧವಾಗಿ, ಆತ್ಮೀಯತೆಯಿಂದ, ಪ್ರೀತಿಯಿಂದ, ಕರುಣೆಯಿಂದ ಬರಮಾಡಿಕೊಂಡು, ಸ್ವಚ್ಛವಾಗಿ, ಸುಂದರವಾಗಿ, ವಿಶಾಲವಾಗಿ ಭವ್ಯವಾಗಿರುವ ಆ ಕಟ್ಟಡದಲ್ಲಿ ನಮ್ಮನ್ನು ಸ್ವಾಗತಿಸಿ ಭೇಟಿ ಮಾಡುವ ಅವಕಾಶ ಕಲ್ಪಿಸಲಾಯಿತು. ಆ ಪ್ರಯಾಣದಲ್ಲಿ ಉತ್ತರ ಕನ್ನಡದ ಅತ್ಯಂತ ದಟ್ಟ ಕಾಡುಗಳ […]

    The post ಕಾಡು ಉಳಿಸಿ……. ನಾಡು ಉಳಿಸಿ……. appeared first on nudikarnataka.



    ವಿವೇಕಾನಂದ ಎಚ್.ಕೆ

    ಈ ತಕ್ಷಣಕ್ಕೆ ಯಾವುದು ಹೆಚ್ಚು ಮಹತ್ವದ್ದು ಮತ್ತು ತೀರಾ ಅನಿವಾರ್ಯವಾದದ್ದು…….

    ಇತ್ತೀಚೆಗೆ ಶಾಂತಿಗಾಗಿ ನೊಬೆಲ್ ಪ್ರಶಸ್ತಿ ವಿಜೇತ ಟಿಬೆಟ್ ನ ಬೌದ್ಧ ಧರ್ಮಗುರು ದಲೈಲಾಮಾ ಅವರನ್ನು ಭೇಟಿಯಾಗಲು ಉತ್ತರ ಕನ್ನಡದ ಮುಂಡಗೋಡ ಟಿಬೆಟಿಯನ್ ನಿರಾಶ್ರಿತರ ಶಿಬಿರಕ್ಕೆ ಹೋಗಿದ್ದೆವು. ಅತ್ಯಂತ ಶಿಸ್ತು ಬದ್ಧವಾಗಿ, ಆತ್ಮೀಯತೆಯಿಂದ, ಪ್ರೀತಿಯಿಂದ, ಕರುಣೆಯಿಂದ ಬರಮಾಡಿಕೊಂಡು, ಸ್ವಚ್ಛವಾಗಿ, ಸುಂದರವಾಗಿ, ವಿಶಾಲವಾಗಿ ಭವ್ಯವಾಗಿರುವ ಆ ಕಟ್ಟಡದಲ್ಲಿ ನಮ್ಮನ್ನು ಸ್ವಾಗತಿಸಿ ಭೇಟಿ ಮಾಡುವ ಅವಕಾಶ ಕಲ್ಪಿಸಲಾಯಿತು.

    ಆ ಪ್ರಯಾಣದಲ್ಲಿ ಉತ್ತರ ಕನ್ನಡದ ಅತ್ಯಂತ ದಟ್ಟ ಕಾಡುಗಳ ನಡುವೆ, ಕಾಳಿ ನದಿಯ ಅಂಚಿನಲ್ಲಿ ಪ್ರಯಾಣ ಮಾಡುತ್ತಾ, ಅಲ್ಲಿನ ಕಾಡಿನ ಸಫಾರಿ, ಮೊಸಳೆ ಪಾರ್ಕ್, ಸೂಪ ಜಲಾಶಯ, ಕಾಳಿ ಜಲವಿದ್ಯುತ್ ಯೋಜನೆಯ ಎತ್ತರದ ಪ್ರದೇಶದಲ್ಲಿ ಪ್ರಾಕೃತಿಕ ಸೌಂದರ್ಯವನ್ನು ಸವಿಯುತ್ತಾ, ದಟ್ಟ ಕಾಡಿನ ನಡುವೆ ಬರುತ್ತಿರಬೇಕಾದರೆ ನನ್ನ ಆತ್ಮೀಯ ಮಿತ್ರರು, ಬೆಂಗಳೂರು ಜಲಮಂಡಳಿಯ ಉದ್ಯೋಗಿಯೂ ಆದ ಶ್ರೀ ಮಲ್ಲಿಕಾರ್ಜುನ್ ಅವರು ಒಂದು ಅತ್ಯಂತ ಗಮನಾರ್ಹವಾದ ಮತ್ತು ವ್ಯವಸ್ಥೆಯ ಇನ್ನೊಂದು ಮುಖವನ್ನು ಪರಿಚಯಿಸುವ ವಿಷಯ ಪ್ರಸ್ತಾಪಿಸಿದರು.

    ಅಲ್ಲೆಲ್ಲಾ ರಸ್ತೆಗಳಲ್ಲಿ
    ” ಕಾಡು ಉಳಿಸಿ ನಾಡು ಉಳಿಸಿ ”
    ” ಕಾಡು ಉಳಿದರೆ ನಾಡು ಉಳಿಯುತ್ತದೆ ”
    ” ಹಸಿರೇ ಉಸಿರು ”
    ” ಋಕ್ಷೋ ರಕ್ಷತಿ ರಕ್ಷಿತ: ”
    ” ಕಾಡಿಲ್ಲದೆ ನಾಡಿಲ್ಲ …..”
    ಮುಂತಾದ ಕಾಡನ್ನು, ಪರಿಸರವನ್ನು ರಕ್ಷಿಸುವ ಮಹತ್ವದ ಜಾಗೃತಿ ಸಂದೇಶಗಳನ್ನು ಬರೆದ ಫಲಕಗಳನ್ನು ತೋರಿಸುತ್ತಾ ಹೇಳಿದರು
    ” ಮನುಷ್ಯನ ಎಷ್ಟೆಲ್ಲಾ ಆಕ್ರಮಣದ ನಡುವೆಯೂ ಕಾಡು ಇನ್ನೂ ಸಾಕಷ್ಟು ಉಳಿದಿದೆ. ಉಳಿಯುತ್ತಿದೆ, ಬೆಳೆದಿದೆ, ಬೆಳೆಯುತ್ತಲೇ ಇರುತ್ತದೆ. ಆದರೆ ನಿಜವಾದ ಸಮಸ್ಯೆ ಇರುವುದು ನಾಡಿನಲ್ಲಿ. ನಾಡು ನಾಶವಾಗುತ್ತಿದೆ, ನಾಡು ಉಳಿಯುತ್ತಿಲ್ಲ. ಈಗ ನಿಜವಾಗಲೂ ರಕ್ಷಿಸಬೇಕಾಗಿರುವುದು ಕಾಡನ್ನಲ್ಲ ನಾಡನ್ನು ಎಂದರು.

    ಏಕೆಂದರೆ ಈ ನಾಡು ತನ್ನ ಭಾರಕ್ಕೆ, ತನ್ನ ತ್ಯಾಜ್ಯಕ್ಕೆ, ತನ್ನ ದುಷ್ಟತನಕ್ಕೆ ತಾನೇ ನಾಶವಾಗುವ ಹಂತ ತಲುಪಿದೆ. ಆದ್ದರಿಂದ ನಿಜವಾಗಲೂ ಆಗಬೇಕಾಗಿರುವುದು ಕಾಡಿನ ಉಳಿವಲ್ಲ, ನಾಡಿನ ಉಳಿವು. ಅದಕ್ಕಾಗಿಯೇ ಮನುಷ್ಯನನ್ನು ಶಿಕ್ಷಣ ನೀಡಿ ವಿದ್ಯಾವಂತರನ್ನಾಗಿ ಮಾಡಿದರೆ, ಅದೇ ಶಿಕ್ಷಣದಿಂದ ಇದೇ ಮನುಷ್ಯರು ಅಜ್ಞಾನಿಗಳಾಗಿ, ಅನಾಗರಿಕರಾಗಿ ಎಲ್ಲವನ್ನೂ ಧ್ವಂಸ ಮಾಡುತ್ತಾ, ಸಿಮೆಂಟ್ ಕಾಂಕ್ರಿಟ್ ನಗರಗಳನ್ನು ನಿರ್ಮಿಸುತ್ತಾ, ತಾವೇ ನಾಶವಾಗುತ್ತಿದ್ದಾರೆ. ಆದ್ದರಿಂದ ಆಗಬೇಕಾಗಿರುವ ಕೆಲಸ ನಾಡು ಉಳಿಸಿ ಎಂಬುದು ಎಂದು ವ್ಯಂಗ್ಯವಾದರೂ ಬಹುತೇಕ ವಾಸ್ತವದ ಹತ್ತಿರಕ್ಕೆ ಇರುವ ವಿಷಯವನ್ನು ಪ್ರಸ್ತಾಪಿಸಿದರು.

    ನಿಜಕ್ಕೂ ಒಂದು ಕ್ಷಣ ಅವಾಕ್ಕಾದೆ. ಹೌದೌದು, ಅವರ ಮಾತಿನಲ್ಲಿ ಸಂಪೂರ್ಣ ಸತ್ಯಾಂಶವಿದೆ ಎನಿಸಿತು. ಇಂದು ಕೇವಲ ಬೆಂಗಳೂರು ಅಥವಾ ಬೆಳಗಾವಿ, ಹುಬ್ಬಳ್ಳಿ, ಕೋಲಾರ, ಕಲಬುರ್ಗಿ, ರಾಯಚೂರು ಮುಂತಾದ ಧೂಳಿನ ನಗರಗಳು ಮಾತ್ರವಲ್ಲ ಬಹುತೇಕ ಸಣ್ಣ ಪಟ್ಟಣಗಳು ಸಹ ಗಾಳಿ, ನೀರು, ಆಹಾರದ ವಿಷಯದಲ್ಲಿ ಅತ್ಯಂತ ಕೆಳಮಟ್ಟ ತಲುಪಿದೆ. ವಾಸಿಸಲು ಯೋಗ್ಯವೇ ಅಲ್ಲದ ಭೌಗೋಳಿಕ ವಾತಾವರಣವನ್ನು ನಿರ್ಮಿಸಿದೆ. ಎಲ್ಲೆಲ್ಲೂ ಧೂಳಿನ ಕಣಗಳು, ಕಲುಷಿತ ನೀರು , ವಿಷಯುಕ್ತ, ರಾಸಾಯನಿಕಯುಕ್ತ ಕಲಬೆರಕೆ ಆಹಾರಗಳು ನಮ್ಮನ್ನು ನಾಶ ಮಾಡುತ್ತಿದೆ.

    ಇದು ಜೈವಿಕ ನಾಶವಾದರೆ, ಇಡೀ ಸಮಾಜದ ಮಾನವೀಯ ಮೌಲ್ಯಗಳು ನಾಶವಾಗಿರುವುದು ಮಾತ್ರವಲ್ಲ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿವೆ. ಮನುಷ್ಯರ ನಡುವೆ ಇರಬೇಕಾದ ನಂಬಿಕೆ, ಪ್ರೀತಿ, ವಿಶ್ವಾಸ, ಸ್ನೇಹ, ಕರುಣೆ, ತ್ಯಾಗ, ಕ್ಷಮೆ, ಸಹಕಾರ, ಸಮನ್ವಯ, ಸಂಬಂಧಗಳಂತ ಯಾವ ಮೌಲ್ಯಗಳೂ ಇಂದು ತನ್ನ ಮೂಲ ಸ್ವರೂಪದಲ್ಲಿ ಉಳಿದಿಲ್ಲ. ಎಲ್ಲೆಲ್ಲೂ ಅಸಹಕಾರ, ಅಸಹನೆ, ಅಸಹಿಷ್ಣುತೆ, ವಂಚನೆ, ದ್ರೋಹ, ಅಪನಂಬಿಕೆ, ಕೋಪ, ಅಸೂಯೆ, ಅನುಮಾನ ಮನೆ ಮಾಡಿದೆ. ನೆಮ್ಮದಿ, ಸುಖ, ಸಂತೋಷ, ತೃಪ್ತಿ ಮರೆಯಾಗುತ್ತಿದೆ. ಕೊಲೆ, ಅತ್ಯಾಚಾರ, ಆತ್ಮಹತ್ಯೆ, ಭ್ರಷ್ಟಾಚಾರ, ಕುತಂತ್ರ ತಾಂಡವವಾಡುತ್ತಿದೆ. ಮನುಷ್ಯನ ಮಾನಸಿಕ ಮತ್ತು ದೈಹಿಕ ಆರೋಗ್ಯ ಕೆಳಮಟ್ಟಕ್ಕೆ ಇಳಿಯುತ್ತಿದೆ.

    ಒಮ್ಮೆ ಸ್ವಲ್ಪ ಕಲ್ಪಿಸಿಕೊಂಡು ನೋಡಿ. ಒಂದು ವೇಳೆ ಬೆಂಗಳೂರಿನಲ್ಲಿ ಯಾವುದೋ ತಾಂತ್ರಿಕ ತೊಂದರೆಯಿಂದಲೋ, ಬೇರೆ ತೊಂದರೆಯಿಂದಲೋ ಇಲ್ಲಿನ ಕಸವನ್ನು ಒಂದು ವಾರ ವಿಲೇವಾರಿ ಮಾಡದಿದ್ದರೆ ಇಡೀ ಕಸದ ರಾಶಿಯಲ್ಲಿ ಬೆಂಗಳೂರು ಮುಳುಗಿ ಹೋಗುತ್ತದೆ. ಹಾಗೆಯೇ ಒಂದು ವೇಳೆ ವಿದ್ಯುತ್ ಅಥವಾ ನೀರಿನ ಸೌಲಭ್ಯ ಸಿಗದಿದ್ದರೆ ನಗರವೇ ಬೆಚ್ಚಿ ಬೀಳುತ್ತದೆ. ಭದ್ರತೆಯಲ್ಲಿ ಸ್ವಲ್ಪಮಟ್ಟಿಗೆ ವ್ಯತ್ಯಾಸವಾದರೂ ಇಡೀ ನಗರವನ್ನೇ ದೋಚಲಾಗುತ್ತದೆ. ಇದು ಸದ್ಯಕ್ಕೆ ಕೇವಲ ಬೆಂಗಳೂರಿನಂತ ಮಹಾನಗರಗಳಿಗೆ ಮಾತ್ರ ಸೀಮಿತವಾಗಿದ್ದರೂ ಎಲ್ಲಾ ನಗರ, ಪಟ್ಟಣಗಳಲ್ಲೂ ಹೆಚ್ಚು ಕಡಿಮೆ ಇದೇ ಪರಿಸ್ಥಿತಿ ಇದೆ.

    ಹೀಗೆ ನಗರಗಳು, ಇಲ್ಲಿನ ಜನಜೀವನ ವಿನಾಶದಂಚಿಗೆ ತಲುಪಿರುವಾಗ ನಾವು ತುಂಬಾ ಯೋಚಿಸಬೇಕಿರುವುದು, ಶ್ರಮಪಡಬೇಕಾಗಿರುವುದು ನಗರಗಳ ವಿನಾಶದ ಬಗ್ಗೆ, ನಗರಗಳ ಪುನರ್ ನಿರ್ಮಾಣದ ಬಗ್ಗೆ, ನಗರಗಳನ್ನು ಮತ್ತೆ ನಾಗರಿಕ ಜೀವನಕ್ಕೆ ಅಣಿಗೊಳಿಸುವ ಬಗ್ಗೆ. ಹಾಗೆಂದು ಕಾಡು ನಾಶ ಮಾಡಬೇಕು ಅಥವಾ ಕಾಡನ್ನು ನಿರ್ಲಕ್ಷಿಸಬೇಕು ಎಂದಲ್ಲ.

    ಕಾಡು ಬೆಳೆಯುವುದು ಅತ್ಯಂತ ಸಹಜವಾದದ್ದು. ಅದು ಪರಿಸರದ ಬಹುದೊಡ್ಡ ಭಾಗ. ಕಾಡನ್ನು ಅದರ ಪಾಡಿಗೆ ಬಿಟ್ಟರೆ ಸಾಕು, ಅದು ಸಹಜವಾಗಿಯೇ ಬೆಳೆಯುತ್ತದೆ. ಆದರೆ ನಾಡು ಹಾಗಲ್ಲ. ನಾಡು ಕೃತಕವಾಗಿ ನಿರ್ಮಾಣವಾದದ್ದು. ಅದನ್ನು ಅರಿವಿನಿಂದ, ಜವಾಬ್ದಾರಿಯಿಂದ ನಿರ್ವಹಿಸಬೇಕು. ಇಲ್ಲದಿದ್ದರೆ ಕಾಡಿಗಿಂತ ಮೊದಲು ನಾಡೇ ನಾಶವಾಗುತ್ತದೆ.

    ನಾಗರಿಕತೆಯ, ಆಧುನಿಕತೆಯ ಉತ್ತುಂಗದಲ್ಲಿದ್ದೇವೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ನಾವು ವಿನಾಶದಂಚಿಗೆ ಸರಿಯುತ್ತಿರುವ ವಿಷಯವೇ ನಮ್ಮ ಅರಿವಿಗೆ ಬರುತ್ತಿಲ್ಲ. ಅಷ್ಟೊಂದು ಅಸೂಕ್ಷ್ಮವಾಗಿದ್ದೇವೆ, ವಿವೇಚನ ರಹಿತವಾಗಿದ್ದೇವೆ. ಇದು ಅತ್ಯಂತ ಆತಂಕಕಾರಿ ಮತ್ತು ಆಘಾತಕಾರಿ. ಕನಿಷ್ಠ ಪ್ರಜ್ಞಾವಂತ ಸಮುದಾಯ ಈ ವಿಷಯವನ್ನು ಕುರಿತು ಯೋಚಿಸುವಂತಾಗಲಿ, ಎಲ್ಲರಿಗೂ ಧನ್ಯವಾದಗಳು,
    ನಲ್ಬೆಳಗು………

    ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
    ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
    ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
    ಮನಸ್ಸುಗಳ ಅಂತರಂಗದ ಚಳವಳಿ

    The post ಕಾಡು ಉಳಿಸಿ……. ನಾಡು ಉಳಿಸಿ……. appeared first on nudikarnataka.

    Click here to Read More
    Previous Article
    ಅರಸು ದಾಖಲೆಯನ್ನು ಸರಿಗಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
    Next Article
    ದೀರ್ಘಾವಧಿ ಸಿಎಂ ದಾಖಲೆ: ಇಷ್ಟು ವರ್ಷದ ರಾಜಕಾರಣದಲ್ಲಿ ತೃಪ್ತಿ ಇದೆ – ಸಿಎಂ ಸಿದ್ದರಾಮಯ್ಯ

    Related ಮುಖಪುಟ Updates:

    Are you sure? You want to delete this comment..! Remove Cancel

    Comments (0)

      Leave a comment