ವಿವೇಕಾನಂದ ಎಚ್ ಕೆ ಮನಸ್ಸಿನೊಳಗೆ…….. ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಚಲಿಸುವುದು ಮನಸ್ಸು. ಕ್ಷಣ ಮಾತ್ರದಲ್ಲಿ ಲೆಕ್ಕಕ್ಕೂ ಸಿಗದಷ್ಟು ದೂರ ಚಲಿಸಬಲ್ಲದು. ಬೆಳಕಿನ ವೇಗವೂ ಅದಕ್ಕೆ ಸಾಟಿಯಲ್ಲ….. ಅದೇ ಸಮಯದಲ್ಲಿ ಮನಸ್ಸು ಕೆಲವೊಮ್ಮೆ ತಟಸ್ಥವೂ ಆಗಬಲ್ಲದು. ಕಣ್ಣಳತೆಯ ದೂರಕ್ಕೂ ಚಲಿಸಲು ಕಷ್ಟ ಪಡುತ್ತದೆ. ಹುಟ್ಟಿದ ಕ್ಷಣದಿಂದ ತನ್ನ ದೇಹವೆಂಬ ಒಡೆಯನ ಅಂತ್ಯದವರೆಗೂ ನಿರಂತರವಾಗಿ ಚಲಿಸುತ್ತಲೇ ಇರುವ ಮನಸ್ಸಿನ ಪಯಣವೇ ಒಂದು ವಿಸ್ಮಯ ಲೋಕ….. ಸೃಷ್ಟಿಯ ಪ್ರತಿ ಜೀವಿಯ ಮನಸ್ಸು ಯೋಚಿಸುತ್ತಲೇ ಇರುತ್ತದೆ. ಆದರೆ ಮನುಷ್ಯನಷ್ಟು ಸಂಕೀರ್ಣ ಮನಸ್ಸು ಬೇರೆ […]
The post ಮನಸ್ಸಿನೊಳಗೆ……… appeared first on nudikarnataka.
ವಿವೇಕಾನಂದ ಎಚ್ ಕೆ
ಮನಸ್ಸಿನೊಳಗೆ……..
ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಚಲಿಸುವುದು ಮನಸ್ಸು. ಕ್ಷಣ ಮಾತ್ರದಲ್ಲಿ ಲೆಕ್ಕಕ್ಕೂ ಸಿಗದಷ್ಟು ದೂರ ಚಲಿಸಬಲ್ಲದು. ಬೆಳಕಿನ ವೇಗವೂ ಅದಕ್ಕೆ ಸಾಟಿಯಲ್ಲ…..
ಅದೇ ಸಮಯದಲ್ಲಿ ಮನಸ್ಸು ಕೆಲವೊಮ್ಮೆ ತಟಸ್ಥವೂ ಆಗಬಲ್ಲದು. ಕಣ್ಣಳತೆಯ ದೂರಕ್ಕೂ ಚಲಿಸಲು ಕಷ್ಟ ಪಡುತ್ತದೆ.
ಹುಟ್ಟಿದ ಕ್ಷಣದಿಂದ ತನ್ನ ದೇಹವೆಂಬ ಒಡೆಯನ ಅಂತ್ಯದವರೆಗೂ ನಿರಂತರವಾಗಿ ಚಲಿಸುತ್ತಲೇ ಇರುವ ಮನಸ್ಸಿನ ಪಯಣವೇ ಒಂದು ವಿಸ್ಮಯ ಲೋಕ…..
ಸೃಷ್ಟಿಯ ಪ್ರತಿ ಜೀವಿಯ ಮನಸ್ಸು ಯೋಚಿಸುತ್ತಲೇ ಇರುತ್ತದೆ. ಆದರೆ ಮನುಷ್ಯನಷ್ಟು ಸಂಕೀರ್ಣ ಮನಸ್ಸು ಬೇರೆ ಯಾವುದೇ ಪ್ರಾಣಿಗೆ ಇರುವುದಿಲ್ಲ ಎಂದು ಸಹಜವಾಗಿ ಊಹಿಸಬಹುದು.
ಆದಿಯಿಂದ ಅಂತ್ಯದವರೆಗೆ ಮನಸ್ಸು ಚಲಿಸುವ ಹಾದಿ, ಅದರ ಅಗಾಧತೆ, ಅದರ ವಿಸ್ತಾರ, ಅದರ ತಿರುವುಗಳು, ಅದರ ಸೌಂದರ್ಯ, ಅದರ ವಿಕೃತಗಳು, ಅದರ ನೋವು ನಲಿವುಗಳು, ಅದು ಉಂಟುಮಾಡುವ ತಲ್ಲಣಗಳು, ಪ್ರತಿ ಕ್ಷಣ ಬದಲಾಗುವ ಪ್ರತಿಕ್ರಿಯೆಗಳು, ಅದರ ಪರಿಣಾಮವಾಗಿ ಮತ್ತಷ್ಟು ಕ್ರಿಯೆಗಳು, ತನ್ನದೇ ಮನಸ್ಸಿನ ಹಾದಿಯ ಮುಖಾಮುಖಿ, ಅದಕ್ಕೆ ಎದುರಾಗವ ಮತ್ತು ಪಲಾಯನ ಮಾಡುವ ಮುಖವಾಡಗಳು, ತಪ್ಪು ಕಲ್ಪನೆಗಳು, ಆಕಸ್ಮಿಕಗಳು, ಮನಸ್ಸು ಕಲಿಸಿಕೊಡುವ ಪಾಠಗಳು, ನಾವು ಅರ್ಥ ಮಾಡಿಕೊಳ್ಳುವ ಅಥವಾ ಅಪಾರ್ಥ ಮಾಡಿಕೊಳ್ಳುವ ಮನಸ್ಸಿನ ಪಾಠಗಳು ಹೀಗೆ ಬಳಕೆಯಲ್ಲಿರುವ ಭಾಷೆಯ ಅಕ್ಷರಗಳಿಗೆ ಅದರ ಹಾದಿಗಳನ್ನು ದಾಖಲಿಸುವ ಸಾಮರ್ಥ್ಯವೂ ಇಲ್ಲ…..
ಮನಸ್ಸಿನ ಹಾದಿ ದಿಢೀರನೇ ಮೇಲಕ್ಕೆ ಸಾಗುತ್ತದೆ, ಪ್ರಪಾತಕ್ಕೂ ಕುಸಿಯುತ್ತದೆ, ಒಮ್ಮೊಮ್ಮೆ ಜ್ವಾಲಾಮುಖಿಯಾಗುತ್ತದೆ, ಇನ್ನೊಮ್ಮೆ ತಣ್ಣನೆಯ ನೀರವ ಮೌನ, ಮಗದೊಮ್ಮೆ ವಿಷಾಧನೀಯ ಜಿಗುಪ್ಸೆ, ಜೀವನೋತ್ಸಾಹದ ನಡುವೆಯೇ ಏಕಾಂತದ ಆತಂಕ, ಸೋಲಿನ ಕನವರಿಕೆ, ಸಾವಿನ ಭಯ ಭಾವನೆಗಳಿಗೂ ನಿಲುಕದಷ್ಟು ಗೊಂದಲ….
ಆ ಮನಸ್ಸಿನ ಹಾದಿಯ ನಿಯಂತ್ರಣವೇ ಒಂದು ಸವಾಲು ಮತ್ತು ಬದುಕಿನ ಬಹುತೇಕ ಸಾರ್ಥಕತೆ ಅಡಗಿರುವುದೇ ಈ ಮನಸ್ಸಿನ ನಿಯಂತ್ರಣದಲ್ಲಿ. ಆ ನಿಯಂತ್ರಣಕ್ಕೆ ಅಸಾಮಾನ್ಯ ಸಾಧನೆ ಬೇಕು. ಆದರೆ ಆ ಸಾಧನೆಯ ಮಾರ್ಗಗಳು ಮಾತ್ರ ಅತ್ಯಂತ ಕಠಿಣ. ಇಂದಿನ ಆಧುನಿಕ ಜೀವನಶೈಲಿಯಲ್ಲಿ ಬಹುತೇಕ ಅದು ಅಸಾಧ್ಯ ಎಂದೇ ಭಾವಿಸಲಾಗಿದೆ. ಅದನ್ನು ಸಾಧ್ಯವಾಗಿಸದೇ ಬದುಕು ಅಪೂರ್ಣ ಮತ್ತು ಬದುಕಿನ ಗುಣಮಟ್ಟ ಖಂಡಿತ ನಮಗರಿವಿಲ್ಲದೇ ಕುಸಿದಿರುತ್ತದೆ. ಅದರ ಕೊರತೆಯಲ್ಲಿಯೇ ಬಹುತೇಕರು ನಿರ್ಗಮಿಸಿರುತ್ತಾರೆ. ಮತ್ತೆ ಕೆಲವರು ಗುರಿ ತಲುಪದೇ ಮಧ್ಯದಲ್ಲಿಯೇ ನಿರಾಶರಾಗುತ್ತಾರೆ. ಅಪರೂಪದಲ್ಲಿ ಅಪರೂಪಕ್ಕೆ ಒಬ್ಬರು ಯಶಸ್ವಿಯಾಗುತ್ತಾರೆ. ಅದು ಅವರ ಸ್ವಂತ ಅನುಭವವಾಗಿಯೇ ಉಳಿದು ಸಾರ್ವತ್ರಿಕವಾಗುವುದೇ ಇಲ್ಲ. ಅದು ಕೇವಲ ಪುಸ್ತಕಗಳಲ್ಲಿ ಮತ್ತು ಉಪನ್ಯಾಸಗಳಲ್ಲಿ ಮಾತ್ರ ಉಳಿಯುತ್ತದೆ…
ಸಾಮಾನ್ಯ ಮನುಷ್ಯರು ಇದನ್ನು ಸಾಧಿಸಲು ಆ ಮಾರ್ಗದಲ್ಲಿ ಮನಸಿನೊಳಗೊಂದು ಪಯಣ……….
ಬಹುಶಃ ಇದರಷ್ಟು ರೋಚಕ ಇದರಷ್ಟು ಆತ್ಮ ತೃಪ್ತಿ ಇನ್ನೊಂದಿರಲಾರದು………..
ಹೊರಗೆಲ್ಲೋ ಪ್ರವಾಸ,
ಇನ್ನೊಬ್ಬರ ವಿಮರ್ಶೆ,
ಬದುಕಿನ ಜಂಜಾಟ,
ಅಜ್ಞಾನ ಅಸಹನೆ ಅಹಂಕಾರ ಮುಂತಾದ ಕಾರಣಗಳಿಗಾಗಿ
ನಮ್ಮೊಳಗಿನ ಬೇಡಿಕೆಗಳ ಪೂರೈಕೆಯಲ್ಲಿ ನಮ್ಮ ಒಳಗಿನ ಪ್ರಯಾಣಕ್ಕೆ ಸಮಯವೇ ಇರುವುದಿಲ್ಲ…..
ಕೆಲವೊಮ್ಮೆ ಸಮಯವಿದ್ದರು ಅದರ ಆಗಾಧತೆಗೆ ಅಂಜಿ ಅದರೊಳಗೆ ಪ್ರವೇಶಿಸಲು ಭಯ ಮತ್ತು ನಿರಾಸಕ್ತಿ ಮೂಡುತ್ತದೆ…..
ನಮ್ಮೊಳಗೆ ನಾವು ಪ್ರವೇಶಿಸದ ಬದುಕು ಒಂದು ರೀತಿಯಲ್ಲಿ ಅಪೂರ್ಣ…….
ನಮ್ಮೊಳಗೆ ನಾವು ಪ್ರವೇಶಿಸುವುದು ಹೇಗೆ ಮತ್ತು ಅಲ್ಲಿನ ಪಯಣ ಹೇಗೆ…….
ಸೃಷ್ಟಿ……
75 ಭಾಗ ನೀರು – 25 ಭಾಗ ಭೂಮಿ…….
ಆ ಭೂಮಿಯ ಮೇಲೆ ಗಾಳಿ ನೀರು ಬೆಳಕು ಬೆಟ್ಟ ಗುಡ್ಡ ಕಾಡು ನದಿ ಸರೋವರ ವಿಚಿತ್ರ ಪ್ರಾಣಿಗಳು…..
ಅದರಲ್ಲೊಂದು ವೈಶಿಷ್ಟ್ಯದ ಪ್ರಾಣಿ ಎಂಬ ಮನುಷ್ಯ……
ಆ ಮನುಷ್ಯ ಪ್ರಾಣಿಯ ಬಣ್ಣದಲ್ಲಿ ಕಪ್ಪು ಬಿಳುಪು ಕಂದು ಎಂಬಿತ್ಯಾದಿ ಒಂದಷ್ಟು ವ್ಯತ್ಯಾಸಗಳು……
ಆ ವ್ಯತ್ಯಾಸಗಳಲ್ಲಿ ಈ ಪ್ರಾಣಿಯ ಆಚರಣೆಯಲ್ಲಿ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಬೌದ್ದ ಜೈನ ಪಾರ್ಸಿ ಸಿಖ್ ಇತ್ಯಾದಿ ಇತ್ಯಾದಿ ಭಿನ್ನತೆಗಳು…..
ಆ ಭಿನ್ನತೆಗಳಲ್ಲಿ ಅಮೆರಿಕ ಚೀನಾ ಆಫ್ರಿಕಾ ರಷ್ಯಾ ಆಸ್ಟ್ರೇಲಿಯಾ ಪಾಕಿಸ್ತಾನ ಭಾರತ ಶ್ರೀಲಂಕಾ ಮುಂತಾದ ಪ್ರದೇಶಗಳ ವಿಂಗಡನೆ…..
ಆ ವಿಂಗಡನೆಗಳಲ್ಲಿ ಕನ್ನಡ ತಮಿಳು ಹಿಂದಿ ಇಂಗ್ಲಿಷ್ ಫ್ರೆಂಚ್ ಸಂಸ್ಕೃತ ಮುಂತಾದ ಅನೇಕ ಭಾಷಾ ಪ್ರಬೇಧಗಳು….
ಆ ಪ್ರಬೇಧಗಳ ಮನುಷ್ಯ ಪ್ರಾಣಿಗಳಲ್ಲಿ ಅಸ್ಪೃಶ್ಯ ಬ್ರಾಹ್ಮಣ ಗೌಡ ಲಿಂಗಾಯತ ಪಟೇಲ ಎಂಬಿತ್ಯಾದಿ ಭೇದಗಳು……
ಆ ಭೇದಗಳಲ್ಲಿ ಬಡವ ಶ್ರೀಮಂತ ಮೇಲು ಕೀಳು ವಿದ್ಯಾವಂತ ಅನಕ್ಷರಸ್ಥ ಎಂಬ ತಾರತಮ್ಯಗಳು…..
ಆ ತಾರತಮ್ಯಗಳಲ್ಲಿ ಜವಾನ ಅಧಿಕಾರಿ ಮಂತ್ರಿ ಒಡೆಯ ಆಳು ಕೂಲಿ ಎಂಬ ವಿಭಾಗಗಳು……
ಆ ವಿಭಾಗಗಳಲ್ಲಿ ಅಪ್ಪ ಅಮ್ಮ ಗಂಡ ಹೆಂಡತಿ ಮಕ್ಕಳು ಎಂಬ ಅನೇಕ ಸಂಬಂಧಗಳು……
ಆ ಸಂಬಂಧಗಳಲ್ಲಿ ಆರ್ಥಿಕ ಸಾಮಾಜಿಕ ಶೈಕ್ಷಣಿಕ ರಾಜಕೀಯ ಮುಂತಾದ ಅಸಮಾನತೆಗಳು….
ಆ ಅಸಮಾನತೆಗಳಲ್ಲಿ ನಮ್ಮ ಸ್ಥಾನಮಾನವನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು…..
ಅಂದರೆ ಸೃಷ್ಟಿಯ ಮೂಲದಿಂದ ನಮ್ಮ ಯೋಚನಾ ಶಕ್ತಿ ರೂಪಗೊಳ್ಳಬೇಕು ಮತ್ತು ಪ್ರಾರಂಭವಾಗಬೇಕು……
ಮುಂದೆ….
ಇಷ್ಟು ಅರ್ಥಮಾಡಿಕೊಳ್ಳುವ ವೇಳೆಗಾಗಲೇ ಸೃಷ್ಟಿಯಲ್ಲಿ ನಮ್ಮ ಅಸ್ತಿತ್ವದ ಒಂದು ಅಂದಾಜು, ಈ ಸಮಾಜ ಅಥವಾ ದೇಶದಲ್ಲಿ ಹಾಗು ಕೌಟುಂಬಿಕ ವ್ಯವಸ್ಥೆಯಲ್ಲಿ ನಮ್ಮ ಸ್ಥಾನಮಾನದ ಒಂದು ಚಿತ್ರಣ ನಮ್ಮ ಮನಸ್ಸಿನಲ್ಲಿ ಮೂಡುತ್ತದೆ.
ಆ ಮನಸ್ಸಿನ ಪ್ರವೇಶ ದ್ವಾರದ ಮೂಲಕ ಆತ್ಮದೊಳಗೆ ಹೆಜ್ಜೆ ಇಡಲು ಪ್ರಾರಂಭಿಸಿ….
ಇಲ್ಲಿಯವರೆಗಿನ ನಿಮ್ಮ ಅನುಭವ ಅಧ್ಯಯನ ಚಿಂತನೆ ಅರಿವು ಎಲ್ಲವನ್ನೂ ಒಟ್ಟುಗೂಡಿಸಿ ಒಂದೊಂದು ಹೆಜ್ಜೆ ಇಡುತ್ತಾ ಮುಕ್ತವಾಗಿ ಸಂಚರಿಸಿ……
ಸೊನ್ನೆಯಿಂದ ನೂರರವರೆಗಿನ ಸಮಯ ಅಥವಾ ಕಾಲವನ್ನು ಮನುಷ್ಯ ಪ್ರಾಣಿಯ ಜೀವನ ಅಥವಾ ಬದುಕು ಎಂದು ಪರಿಗಣಿಸಲಾಗುತ್ತದೆ………
ಈ ಬದುಕಿನ ಪಯಣದ ಹಾದಿ ಅರ್ಥ ಉದ್ದೇಶ ಗುರಿ ಸಾರ್ಥಕತೆ ಸೃಷ್ಟಿಯ ಸಹಜತೆ ಎಲ್ಲವನ್ನೂ ನಮ್ಮ ತಿಳಿವಳಿಕೆಯ ಮಿತಿಯಲ್ಲಿ ನಾವು ಗ್ರಹಿಸಿದಂತೆ ನಮ್ಮೊಳಗೆ ಒಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ನಮ್ಮ ಜವಾಬ್ದಾರಿ ಕರ್ತವ್ಯ ಯಾವುದು ಎಂದು ಸ್ಪಷ್ಟಪಡಿಸಿಕೊಳ್ಳಬೇಕು. ನಮ್ಮ ದೇಹ ಮತ್ತು ಮನಸ್ಸಿನ ಬೇಡಿಕೆ ಮತ್ತು ಪೂರೈಕೆಯ ಮಾರ್ಗಗಳನ್ನು ಗುರುತಿಸಿಕೊಳ್ಳಬೇಕು.
ವೈಯಕ್ತಿಕತೆ, ಕೌಟುಂಬಿಕತೆ, ಸಾಮಾಜಿಕತೆ, ನೈತಿಕತೆ, ಮಾನವೀಯತೆ ಎಲ್ಲವನ್ನೂ ಸಮಗ್ರವಾಗಿ ಪರಿಶೀಲಿಸಿ ನಮ್ಮ ನಡೆಯನ್ನು ರೂಪಿಸಿಕೊಳ್ಳಲು ಪ್ರಯತ್ನಿಸಬೇಕು……
ಅತಿಮುಖ್ಯವಾಗಿ ಬದುಕಿನ ಏರಿಳಿತಗಳಲ್ಲಿ ನಮ್ಮ ಪ್ರತಿಕ್ರಿಯೆ ಮತ್ತು ನಿಯಂತ್ರಣ ಮನಸ್ಸಿನೊಳಗಿನ ಪಯಣದಲ್ಲಿ ಮಹತ್ವ ಪಡೆಯಬೇಕಾದ ವಿಷಯ…..
ಏಕೆಂದರೆ, ಈ ಪಯಣದಲ್ಲಿ ನಮ್ಮ ಹುಡುಕಾಟ ನಮ್ಮೊಳಗಿನ ಅಂತಃ ಶಕ್ತಿಯನ್ನು ಉದ್ದೀಪನಗೊಳಿಸುವಂತಿರಬೇಕು. ಭವಿಷ್ಯದ ಕನಸುಗಳಿಗೆ ನೀರೆರೆಯುವಂತಿರಬೇಕು. ನಮ್ಮಲ್ಲಿರುವ ಕತ್ತಲನ್ನು ಕಳೆದು ಬೆಳಕು ಮೂಡುವಂತಿರಬೇಕು. ನಮ್ಮ ನೆಮ್ಮದಿಯ ಮಟ್ಟ ಹೆಚ್ಚುವಂತಿರಬೇಕು. ಒಟ್ಟಿನಲ್ಲಿ ಈ ಪಯಣ ನಮಲ್ಲಿ ಸ್ಪೂರ್ತಿ ತುಂಬಿ ನಮ್ಮನ್ನು ಪುನಶ್ಚೇತನ ಗೊಳಿಸುವಂತಿರಬೇಕು. ನಮ್ಮಲ್ಲಿನ ಸಂಕುಚಿತತೆ ಕಡಿಮೆಯಾಗಿ ವಿಶಾಲ ಮನೋಭಾವ ಬೆಳೆಸುವಂತಿರಬೇಕು…….
ಏಕೆಂದರೆ, ಮನಸ್ಸೆಂಬುದು ರೀ ಚಾರ್ಜಬಲ್ ಬ್ಯಾಟರಿ ಇದ್ದಂತೆ. ಅದನ್ನು ಆಗಾಗ ರೀ ಚಾರ್ಜ್ ಮಾಡುತ್ತಲೇ ಇರಬೇಕು ಮತ್ತು ಅದನ್ನು ಹೊರಗಿನ ಮೂಲಗಳ ಜೊತೆಗೆ ಒಳಗಿನ ಸಂಪನ್ಮೂಲಗಳನ್ನು ಹೆಚ್ಚಾಗಿ ಬಳಸಿ ರೀ ಚಾರ್ಜ್ ಮಾಡಿದರೆ ಅದು ದೀರ್ಘ ಬಾಳಿಕೆ ಮತ್ತು ಹೆಚ್ಚು ದಕ್ಷತೆಯಿಂದ ಕ್ರಿಯಾತ್ಮಕವಾಗಿ ಕೆಲಸ ಮಾಡುತ್ತದೆ…..
ಅದಕ್ಕಾಗಿ ಆಗಾಗ ಅನಂತತೆಯೆಂಬ ಮನಸ್ಸಿನೊಳಗೆ ಸದಾ ಪಯಣಿಸುತ್ತಲೇ ಇರಬೇಕು. ಯಾರೋ ಯೋಗಿಗಳು, ಆಧ್ಯಾತ್ಮಿಕ ಗುರುಗಳು, ಸಾಧಕರು, ಋಷಿ ಮುನಿಗಳು ಮುಂತಾದವರು ಮಾತ್ರ ಮಾಡುವ ಮತ್ತು ಮಾಡಲು ಸಾಧ್ಯವಾಗುವ ವಿಷಯವಿದು. ಸಾಮಾನ್ಯ ಜನರಿಗೆ ಅಸಾಧ್ಯ ಎಂಬ ತಪ್ಪು ಕಲ್ಪನೆ ಮೂಡಿಸಲಾಗಿದೆ…..
ಎಲ್ಲಾ ಆರೋಗ್ಯವಂತ ಸಹಜ ಸಾಮಾನ್ಯ ವ್ಯಕ್ತಿಗಳು ಸಹ ತಮ್ಮ ಮನಸ್ಸಿನೊಳಗೆ ತಮಗೆ ಸಾಧ್ಯವಿರುವ ತಮ್ಮ ಮಿತಿಯಲ್ಲಿ ಸದಾ ಪ್ರಯಾಣಿಸಬಹುದು. ನೀವು ಸಹ ಸ್ವಚ್ಛಂದವಾಗಿ, ಮುಕ್ತವಾಗಿ ಪ್ರಯತ್ನಿಸಿ ನೋಡಿ. ಪರಿಣಾಮ – ಫಲಿತಾಂಶ ನಿಮ್ಮ ವಿವೇಚನೆಗೆ ಬಿಡುತ್ತಾ…,.
ಮನಸ್ಸೆಂಬುದು ಅಕ್ಷಯ ಪಾತ್ರೆ……………….
ನನ್ನೊಳಗು ನಿನ್ನೊಳಗು ಎಲ್ಲರೊಳಗೂ,
ಏನಿದೆಯೆಂದು ಕೇಳದಿರು,
ಏನಿಲ್ಲ,
ಅದರ ಆಳ ಅಗಲ ಎತ್ತರಗಳನ್ನು ಬಲ್ಲವರಿಲ್ಲ,
ನಮ್ಮೊಳಗಿನ ಆಗಾಧ ಸಾಮರ್ಥ್ಯವೇ ಮನಸ್ಸು,
ಪ್ರೀತಿ ಪ್ರೇಮ ವಾತ್ಸಲ್ಯಗಳು ತುಂಬಿರುವಂತೆ,
ಕೋಪ ದ್ವೇಷ ಅಸೂಯೆಗಳು ತುಂಬಿವೆ,
ಅದ್ಭುತ ಆಶ್ಚರ್ಯವೆಂದರೆ,
ಅದರ ಆಯ್ಕೆಗಳೂ ನಿನ್ನವೇ,
ಯಾರಿಗುಂಟು ಯಾರಿಗಿಲ್ಲ,
ಸಾವನ್ನು ಸಂಭ್ರಮಿಸುವ ಸ್ವಾತಂತ್ರ್ಯವೂ ನಿನ್ನದೇ,
ಬದುಕನ್ನು ದ್ವೇಷಿಸುವ ಸ್ವಾತಂತ್ರ್ಯವೂ ನಿನ್ನದೇ,
ಕೊರಗೇಕೆ ಓ ಮನುಜ ನೀ ಅಲ್ಪನಲ್ಲ,
ಈ ಸೃಷ್ಟಿಯೂ ನಿನ್ನ ಮನಸ್ಸಿಗಿಂತ ದೊಡ್ಡದಲ್ಲ,
ಸೃಷ್ಟಿಯಾಚೆಗೂ ವಿಸ್ತರಿಸಬಲ್ಲದು ನಿನ್ನೀ ಮನಸು,
ನೀನೇನು ಸಾಮಾನ್ಯನಲ್ಲ, ಅಸಾಮಾನ್ಯ,
ಹೃದಯ ಚಿಕ್ಕದೇ ಇರಬಹುದು,
ಮನಸ್ಸಿನ ಅಗಾಧತೆ ನಿನಗೇ ಅರಿವಿಲ್ಲ,
ಹಾಡಬಲ್ಲೆ, ಬರೆಯಬಲ್ಲೆ, ಓದಬಲ್ಲೆ, ಚಿತ್ರಿಸಬಲ್ಲೆ,
ನೆಗೆಯಬಲ್ಲೆ, ಈಜಬಲ್ಲೆ , ಹಾರಾಡಬಲ್ಲೆ,
ಇನ್ನೇಕೆ ತಡ, ಕಿತ್ತೊಗೆ ನಿನ್ನ ನಿರಾಸೆ,
ಈ ಕ್ಷಣದಿಂದ ಈ ಮನಸ್ಸು ನಿನ್ನದೇ,
ಅದಕ್ಕೆ ನೀನೇ ಅಧಿಪತಿ,
ಎದ್ದು ಕುಳಿತುಕೋ ನಿನ್ನ ಮನದ ಸಿಂಹಾಸನದ ಮೇಲೆ,
ಆಳು ನಿನ್ನ ಮನಸ್ಸಿನ ಸಾಮ್ರಾಜ್ಯವನ್ನು,
ನಿನಗಿಷ್ಟಬಂದಂತೆ,
ಈಗ ನೀನು ರಕ್ತ ಮೂಳೆ ಮಾಂಸಗಳ ಮುದ್ದೆಯಲ್ಲ,
ನೀನು ನಿನ್ನ ವಿಶಾಲ ಮನಸ್ಸಿನ ಚಕ್ರವರ್ತಿ,
ಎಲ್ಲವೂ ಶರಣಾಗಿದೆ ನಿನ್ನ ಕಾಲ ಬಳಿ,
ಆತ್ಮವಿಶ್ವಾಸದ ಮುಂದೆ ಸೃಷ್ಟಿಯೂ ನಿನ್ನ ಮುಷ್ಟಿಯಲ್ಲಿ.
ಇದೊಂದು ದೀರ್ಘ ಮತ್ತು ನಿರಂತರ ಅಭ್ಯಾಸ. ಬದುಕಿನ ಕೊನೆಯ ಪುಟದವರೆಗೂ ನಡೆಯುತ್ತಲೇ ಇರಬೇಕು. ಆ ವ್ಯಕ್ತಿಯ ಜೀವನಮಟ್ಟ ಖಂಡಿತ ಸುಧಾರಣೆಯಾಗಿ Quality of Life ಉನ್ನತ ದರ್ಜೆಗೇರುವ ಎಲ್ಲಾ ಸಾಧ್ಯತೆ ಇದೆ ಎಂಬ ಭರವಸೆ ಮೂಡಿಸುತ್ತಾ…….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ
The post ಮನಸ್ಸಿನೊಳಗೆ……… appeared first on nudikarnataka.