Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಕೈಗಾರಿಕಾ ಚಟುವಟಿಕೆ ಆರಂಭಿಸದಿದ್ದಲ್ಲಿ ನಿವೇಶನಗಳನ್ನು ಮರು ಹಂಚಿಕೆ ಮಾಡಲು ಕ್ರಮ: ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ

    2 weeks ago

    ಉಡುಪಿ, ಡಿ.31: ಜಿಲ್ಲೆಯಲ್ಲಿ ಕೈಗಾರಿಕಾ ಘಟಕ ಸ್ಥಾಪನೆಗೆ ಹಂಚಿಕೆಯಾಗಿರುವ ನಿವೇಶನದಲ್ಲಿ ಉದ್ದಿಮೆದಾರರು ನಿಯಮಾನುಸಾರ ಆರು ತಿಂಗಳ ಒಳಗಾಗಿ ಕೈಗಾರಿಕಾ ಚಟುವಟಿಕೆ ಆರಂಭಿಸಬೇಕು. ತಪ್ಪಿದ್ದಲ್ಲಿ ನಿವೇಶನಗಳನ್ನು ಮರು ಹಂಚಿಕೆ ಮಾಡಲಾಗುವುದೆಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಸೂಚನೆ ನೀಡಿದರು. ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆ, ಕೈಗಾರಿಕಾ ಸ್ಪಂದನ, ಜಿಲ್ಲಾ ಮಟ್ಟದ ರಫ್ತು ಉತ್ತೇಜನ ಸಮಿತಿ ಸಭೆ, ಪ್ರಧಾನಮಂತ್ರಿಯವರ ಉದ್ಯೋಗ ಸೃಜನ ಯೋಜನೆಯ ಡಿ.ಎಲ್.ಎಂ.ಸಿ ಸಭೆ ಹಾಗೂ ಪಿ.ಎಂ […]

    The post ಕೈಗಾರಿಕಾ ಚಟುವಟಿಕೆ ಆರಂಭಿಸದಿದ್ದಲ್ಲಿ ನಿವೇಶನಗಳನ್ನು ಮರು ಹಂಚಿಕೆ ಮಾಡಲು ಕ್ರಮ: ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ appeared first on Namma Udupi Bulletin.



    ಉಡುಪಿ, ಡಿ.31: ಜಿಲ್ಲೆಯಲ್ಲಿ ಕೈಗಾರಿಕಾ ಘಟಕ ಸ್ಥಾಪನೆಗೆ ಹಂಚಿಕೆಯಾಗಿರುವ ನಿವೇಶನದಲ್ಲಿ ಉದ್ದಿಮೆದಾರರು ನಿಯಮಾನುಸಾರ ಆರು ತಿಂಗಳ ಒಳಗಾಗಿ ಕೈಗಾರಿಕಾ ಚಟುವಟಿಕೆ ಆರಂಭಿಸಬೇಕು. ತಪ್ಪಿದ್ದಲ್ಲಿ ನಿವೇಶನಗಳನ್ನು ಮರು ಹಂಚಿಕೆ ಮಾಡಲಾಗುವುದೆಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಸೂಚನೆ ನೀಡಿದರು. ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆ, ಕೈಗಾರಿಕಾ ಸ್ಪಂದನ, ಜಿಲ್ಲಾ ಮಟ್ಟದ ರಫ್ತು ಉತ್ತೇಜನ ಸಮಿತಿ ಸಭೆ, ಪ್ರಧಾನಮಂತ್ರಿಯವರ ಉದ್ಯೋಗ ಸೃಜನ ಯೋಜನೆಯ ಡಿ.ಎಲ್.ಎಂ.ಸಿ ಸಭೆ ಹಾಗೂ ಪಿ.ಎಂ ವಿಶ್ವಕರ್ಮ ಯೋಜನೆಯ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

    ಕೈಗಾರಿಕೋದ್ಯಮಿಗಳು ಕೈಗಾರಿಕಾ ಘಟಕ ಸ್ಥಾಪನೆಗೆ ಪಡೆದಿರುವ ನಿವೇಶನಗಳಲ್ಲಿ ಉದ್ದಿಮೆ ಆರಂಭಿಸದೇ ಹೆಚ್ಚುವರಿ ಕಾಲಾವಕಾಶ ಕೋರಿ ಪದೇ ಪದೇ ಮನವಿ ಸಲ್ಲಿಸುತ್ತಿದ್ದಾರೆ. ಉತ್ಪನ್ನ ಹಾಗೂ ಘಟಕದ ಹೆಸರು ಬದಲಾವಣೆ, ಹೆಚ್ಚುವರಿ ಕಾಲಾವಕಾಶ ಸೇರಿದಂತೆ ಮತ್ತಿತರ ಅಸಮರ್ಪಕ ಕಾರಣ ನೀಡಿ ಕಾರ್ಯಚಟುವಟಿಕೆ ಆರಂಭಿಸದೇ ಇರುವವರ ನಿವೇಶನಗಳನ್ನು, ಕೈಗಾರಿಕೆ ಪ್ರಾರಂಭಿಸಲು ನಿವೇಶನ ಕೋರಿ ಹೊಸದಾಗಿ ಅರ್ಜಿ ಸಲ್ಲಿಸಿರುವ ಆಸಕ್ತರುಗಳಿಗೆ ಮರು ಹಂಚಿಕೆ ಮಾಡಲು ಆದ್ಯತೆಯ ಮೇಲೆ ಕ್ರಮ ವಹಿಸಬೇಕು ಎಂದರು. ಜಿಲ್ಲೆಯಲ್ಲಿ ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ ನೀಡಿದ್ದಲ್ಲಿ ಆರ್ಥಿಕತೆಯ ಅಭಿವೃದ್ಧಿಯ ಜೊತೆಗೆ ಹೆಚ್ಚಿನ ಉದ್ಯೋಗಾವಕಾಶಗಳ ಸೃಷ್ಠಿ ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಕೈಗಾರಿಕಾ ಘಟಕ ಆರಂಭಿಸಲು ಮುಂದೆ ಬರುವ ನವ ಉದ್ದಿಮೆದಾರರಿಗೆ ಪ್ರೋತ್ಸಾಹ ನೀಡುವುದರೊಂದಿಗೆ, ಉದ್ಯಮಿಗಳಾಗಿ ಹೊರಹೊಮ್ಮಲು ಅವಕಾಶ ಮಾಡಿಕೊಡಬೇಕು ಎಂದ ಅವರು, ಜಿಲ್ಲೆಯಲ್ಲಿ ರಫ್ತು ಉದ್ಯಮವನ್ನು ಉತ್ತೇಜಿಸಲು ಎಕ್ಸ್ಪೋರ್ಟ್ ಇನ್ಸ್ಪೆಕ್ಷನ್ ಏಜೆನ್ಸಿ ಅಧಿಕಾರಿಯನ್ನು ಶೀಘ್ರವಾಗಿ ನಿಯೋಜಿಸಬೇಕು ಎಂದರು.

    ಹೊಸದಾಗಿ ನಿವೇಶನ ಕೋರಿ ಆನ್‌ಲೈನ್‌ನಲ್ಲಿ ಸಲ್ಲಿಕೆಯಾಗಿರುವ ಅರ್ಜಿದಾರರ ಜಾಗದ ಬೇಡಿಕೆಯು 2 ಎಕ್ರೆಗಿಂತ ಕಡಿಮೆ ಇದ್ದು, ಯೋಜನಾ ವೆಚ್ಚವೂ 15 ಕೋಟಿಗಿಂತ ಕಡಿಮೆ ಇದ್ದಲ್ಲಿ ಜಿಲ್ಲಾಮಟ್ಟದಲ್ಲಿ ಚರ್ಚಿಸಿ ನಿವೇಶನ ಹಂಚಿಕೆಗೆ ಅನುವು ಮಾಡಿಕೊಡಬೇಕು. ನಿವೇಶನ ಲಭ್ಯವಿಲ್ಲದಿದ್ದಲ್ಲಿ ಹೆಚ್ಚುವರಿ ಜಾಗ ನೀಡುವಂತೆ ಆಯುಕ್ತರಿಗೆ ಪತ್ರ ಬರೆಯಬೇಕು ಎಂದ ಅವರು, ಹೊಸದಾಗಿ ನಿವೇಶನ ಕೋರಿ ಅರ್ಜಿ ಸಲ್ಲಿಸಿದವರ ಪಟ್ಟಿ ನೀಡುವಂತೆ ತಿಳಿಸಿದರು. ಹೊಸ ಕೈಗಾರಿಕಾ ಪ್ರದೇಶ ನಿರ್ಮಾಣಕ್ಕೆ ಹೆಬ್ರಿ ತಾಲೂಕು ಶಿವಪುರದಲ್ಲಿ 74.84 ಎಕ್ರೆ ಹಾಗೂ ಕೆರೆಬೆಟ್ಟುವಿನಲ್ಲಿ 38.75 ಎಕ್ರೆ ಖಾಸಗಿ ಹಾಗೂ ಸರ್ಕಾರಿ ಜಮೀನು ಸೇರಿದಂತೆ ಒಟ್ಟು 113.59 ಎಕ್ರೆ ಜಮೀನಿನ ಗಡಿ ಗುರುತಿಸುವ ಕಾರ್ಯವನ್ನು ಆದ್ಯತೆ ಮೇಲೆ ಕೈಗೊಳ್ಳುವಂತೆ ಈಗಾಗಲೇ ಕೆ.ಐ.ಎ.ಡಿ.ಬಿ ಅಭಿಯಂತರರುಗಳಿಗೆ ಸೂಚಿಸಲಾಗಿದ್ದು, ಇವುಗಳಲ್ಲಿ 36.56 ಎಕ್ರೆ ಸರ್ಕಾರಿ ಜಮೀನು ಮಂಜೂರು ಮಾಡಲು ಗುರುತಿಸಿರುವ ಕೆಲವು ಸರ್ವೇ ನಂಬರ್‌ಗಳು ಅರಣ್ಯ ಹಾಗೂ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಬರುವ ಹಿನ್ನೆಲೆ, ಅರಣ್ಯ ಇಲಾಖೆಯ ಅಧಿಕಾರಿಗಳು ಜಂಟಿ ಸರ್ವೇ ನಡೆಸಿ, ವರದಿ ನೀಡುವಂತೆ ತಿಳಿಸಿದರು.

    ಬೆಳಪು ಕೈಗಾರಿಕಾ ಪ್ರದೇಶದ ಸಂಪರ್ಕ ರಸ್ತೆ ವಿಸ್ತರಣೆಗೆ ಅಗತ್ಯವಿರುವ ಭೂಮಿಯ ಭೂ ಸ್ವಾಧೀನ ಪ್ರಕ್ರಿಯೆಯನ್ನು ಆದ್ಯತೆಯ ಮೇಲೆ ಕೈಗೊಂಡು, ಒಂದು ತಿಂಗಳ ಒಳಗಾಗಿ ಪರಿಹಾರ ಧನವನ್ನು ಸಂತ್ರಸ್ತರಿಗೆ ಹಸ್ತಾಂತರಿಸಬೇಕು. ಪರಿಹಾರ ಪಡೆಯಲು ಹಿಂದೇಟು ಹಾಕುವ ಭೂ ಮಾಲಕರಿಗೆ ಸಂಬಂಧಿಸಿದ ಪರಿಹಾರ ಮೊತ್ತವನ್ನು ನ್ಯಾಯಾಲಯದಲ್ಲಿ ಠೇವಣಿ ಇರಿಸುವುದರೊಂದಿಗೆ ಮುಂದಿನ ಕ್ರಮ ಕೈಗೊಳ್ಳಬೇಕು ಎಂದರು. ಕೈಗಾರಿಕಾ ಪ್ರದೇಶಗಳಲ್ಲಿ ಅಗತ್ಯವಿರುವ ಮೂಲಭೂತ ಸೌಕರ್ಯಗಳಾದ ರಸ್ತೆ, ಚರಂಡಿ, ನೀರಿನ ವ್ಯವಸ್ಥೆ, ವಿದ್ಯುತ್ ಸಂಪರ್ಕ ಸೇರಿದಂತೆ ಮತ್ತಿತರ ಸೌಲಭ್ಯ ಒದಗಿಸಬೇಕು. ಕೈಗಾರಿಕಾ ವಸಾಹತುವಿನಲ್ಲಿ ಖಾಲಿ ಇರುವ ಮಳಿಗೆ ಹಾಗೂ ನಿವೇಶನಗಳ ಹಂಚಿಕೆ ಮಾಡುವ ಕುರಿತು ಪ್ರಕಟಣೆ ಹೊರಡಿಸಿ, ಶೀಘ್ರದಲ್ಲಿ ಹಂಚಿಕೆ ಮಾಡಲು ಕ್ರಮವಹಿಸಬೇಕು ಎಂದರು. ಡಾ.ಸರೋಜಿನಿ ಮಹಿಷಿ ವರದಿಯಂತೆ 50 ಕ್ಕಿಂತ ಹೆಚ್ಚು ಕಾರ್ಮಿಕರುಗಳುಳ್ಳ ಸಣ್ಣ ಕೈಗಾರಿಕಾ ಘಟಕಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ಹೆಚ್ಚಿನ ಆದ್ಯತೆ ನೀಡಿ, ಕೆಲಸಕ್ಕೆ ನಿಯೋಜಿಸಬೇಕು ಎಂಬ ನಿಯಮವಿದೆ. ಕೇವಲ ಡಿ ಗ್ರೂಪ್ ಹುದ್ದೆಗೆ ಮಾತ್ರವಲ್ಲದೇ ಎಲ್ಲಾ ಹುದ್ದೆಗಳಲ್ಲಿಯೂ ಸ್ಥಳೀಯರ ನೇಮಕಾತಿ ಮಾಡಿಕೊಳ್ಳಬೇಕು ಎಂದರು.

    ಕೌಶಲ್ಯಾಭಿವೃದ್ಧಿ ಇಲಾಖೆಯ ವತಿಯಿಂದ ಪಿ.ಎಂ ವಿಶ್ವಕರ್ಮ ಯೋಜನೆಯ 6307 ಫಲಾನುಭವಿಗಳಿಗೆ ಈಗಾಗಲೇ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗಿದೆ. 3992 ಫಲಾನುಭವಿಗಳಿಗೆ ಆರ್ಥಿಕ ನೆರವು ನೀಡಲು ಸಾಲ ಸೌಲಭ್ಯ ಮಂಜೂರಾಗಿದ್ದು, 3675 ಫಲಾನುಭವಿಗಳ ಖಾತೆಗೆ ಆರ್ಥಿಕ ಸಹಾಯಧನವನ್ನು ಪಾವತಿಸಲಾಗಿದೆ ಎಂದ ಅವರು ಈ ಯೋಜನೆಯಡಿ ಆಯ್ಕೆಯಾದವರಿಗೆ ಕೌಶಲ್ಯ ತರಬೇತಿಗಳನ್ನು ಕೌಶಲ್ಯಾಭಿವೃದ್ಧಿ ಇಲಾಖೆ ವತಿಯಿಂದ ನೀಡುವುದರ ಜೊತೆಗೆ ಬ್ಯಾಂಕ್‌ಗಳು ಆದ್ಯತೆಯ ಮೇಲೆ ಆರ್ಥಿಕ ನೆರವು ನೀಡಲು ಮುಂದಾಗಬೇಕು ಎಂದರು. ಪ್ರಧಾನಮಂತ್ರಿ ಉದ್ಯೋಗ ಸೃಜನ ಯೋಜನೆಯಡಿ ಫಲಾನುಭವಿಗಳ 526 ಘಟಕಗಳಿಗೆ 2027.55 ಲಕ್ಷ ರೂ. ಮಾರ್ಜಿನ್ ಹಣ ಬಿಡುಗಡೆಯಾಗಬೇಕಿದ್ದು, ಈವರೆಗೆ 222 ಘಟಕಗಳಿಗೆ 831.12 ಲಕ್ಷ ರೂ. ಮಾತ್ರ ಬಿಡುಗಡೆಯಾಗಿದೆ. ಬಾಕಿ ಉಳಿದ 304 ಘಟಕಗಳಿಗೆ 1196.43 ಲಕ್ಷ ರೂ. ಮಾರ್ಜಿನ ಹಣ ಶೀಘ್ರದಲ್ಲಿ ನೀಡಲು ಕ್ರಮವಹಿಸುವಂತೆ ಸೂಚನೆ ನೀಡಿದರು. ಹೊಸ ಉದ್ದಿಮೆದಾರರು ಕೈಗಾರಿಕೆಗಳನ್ನು ಪ್ರಾರಂಭಿಸಲು ಮುಂದೆ ಬಂದಾಗ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಕುರಿತು ಎಮ್.ಎಸ್.ಎಮ್.ಇ ಗಳಿಗೆ ಬ್ಯಾಂಕ್ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ವತಿಯಿಂದ ಸಾಲ -ಸಹಾಯಧನ ಸೌಲಭ್ಯ, ಸಿಬಿಲ್ ಸ್ಕೋರ್ ಸೇರಿದಂತೆ ಮತ್ತಿತರ ವಿಷಯಗಳ ಬಗ್ಗೆ ಅರಿವು ಮೂಡಿಸಿದ್ದಲ್ಲಿ ಉದ್ಯಮಿಗಳಿಗೆ ಅನುಕೂಲವಾಗಲಿದೆ ಎಂದು ಸಣ್ಣ ಕೈಗಾರಿಕೆಗಳ ಸಂಘದ ಉದ್ದಿಮೆದಾರರು ಮನವಿ ಮಾಡಿದರು.

    ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್ ವಿ ನಾಯಕ್, ಸಣ್ಣ ಕೈಗಾರಿಕಾ ಸಂಘದ ಜಿಲ್ಲಾ ಅಧ್ಯಕ್ಷ ವಸಂತ ಕಿಣಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಸೀತಾರಾಮ ಶೆಟ್ಟಿ, ನಗರಸಭೆ ಆಯುಕ್ತ ಮಂಹಾತೇಶ ಹಂಗರಗಿ, ಖಾಸಿಯಾ ಪ್ರತಿನಿಧಿ ಹರೀಶ್ ಕುಂದರ್, ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು, ಜಿಲ್ಲೆಯ ಸಣ್ಣ ಕೈಗಾರಿಕಾ ಉದ್ದಿಮೆದಾರರು ಹಾಗೂ ಮತ್ತಿತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

    The post ಕೈಗಾರಿಕಾ ಚಟುವಟಿಕೆ ಆರಂಭಿಸದಿದ್ದಲ್ಲಿ ನಿವೇಶನಗಳನ್ನು ಮರು ಹಂಚಿಕೆ ಮಾಡಲು ಕ್ರಮ: ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ appeared first on Namma Udupi Bulletin.

    Click here to Read More
    Previous Article
    ಡಿ.ಆರ್.ಡಿ.ಓ ಕ್ಷಿಪಣಿ ಪರೀಕ್ಷೆ ಯಶಸ್ವಿ
    Next Article
    ಟಿ. ಎನ್. ಸೀತಾರಾಂ ಅವರಿಗೆ ‘ಪಂಚಮಿ ಪುರಸ್ಕಾರ 2026’

    Related ಮುಖಪುಟ Updates:

    Are you sure? You want to delete this comment..! Remove Cancel

    Comments (0)

      Leave a comment